: 98455 22020

Description

ಲೇಖನ ಬರೆದವರು – ಡಾ. ಹರಿಣಿ ಸೂರಜ್ – (ಬಿ. ಎ. ಎಂ. ಎಸ್)
ಪಂಚಕರ್ಮ ಚಿಕಿತ್ಸಾಲಯ ಕಲ್ಯ ಆಯುರ್ವೇದಂ, ಪುತ್ತೂರು

ಸಾಮಾನ್ಯವಾಗಿ, ಜೀವನ ಶೈಲಿ ಹಾಗೂ ಶರೀರ ಪ್ರಕೃತಿ, ಜೈವಿಕ ಕಾರಣಗಳಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ವಯಸ್ಸು ಹೆಚ್ಚಾಗುತ್ತಿದ್ದಂತೆ, ಬೆನ್ನು ಹುರಿಯ ಮೇಲೆ ಪರಿಣಾಮ ಬೀರುವಂತಹ ಆರ್ಥೈಟಿಸ್, ಸ್ಪಾಂಡಿಲೋಸಿಸ್, ಆಸ್ಟಿಯೋ ಆರ್ಥೈಟಿಸ್ ಬೆನ್ನು ನೋವು ಕಾಣಿಸಬಹುದು. ಬೆನ್ನು ಹುರಿಯ ಗಡ್ಡೆಗಳೂ ಸಹ ತೀವ್ರವಾದ ಬೆನ್ನು ನೋವನ್ನು ಉಂಟುಮಾಡಬಹುದು.

ನಾವು ಬಹಳ ದೀರ್ಘ ಅವಧಿಯವರೆಗೆ ಕುಳಿತುಕೊಂಡು ಕಂಪ್ಯೂಟರ್‍ ನಲ್ಲಿ ಕೆಲಸ ಮಾಡುತ್ತಾ, ಹಾಸಿಗೆಯಲ್ಲಿ ಮಲಗಿಕೊಂಡು ಟಿ.ವಿ ವೀಕ್ಷಿಸುತ್ತಿರುತ್ತೇವೆ. ಹೀಗೆ ಕುಳಿತು, ನಿಂತು, ಮಲಗಿಕೊಂಡಿರುವಾಗ ನಮ್ಮ ಅರಿವಿಗೆ ಬರದಂತೆ ನಾವು ತಪ್ಪಾದ ಭಂಗಿಗಳಲ್ಲೇ ಇದ್ದುಕೊಂಡು ನಮ್ಮ ಶರೀರದ ಭಾರ ಸಮವಾಗಿ ಹಂಚಿಕೆಯಾಗದೆ ಇರುವುದರಿಂದಲೂ ಸಹ ಬೆನ್ನು ನೋವಿಗೆ ಕಾರಣವಾಗುತ್ತದೆ.

ಬೆನ್ನು ನೋವು ಆರಂಭವಾದರೆ ಕೆಲವು ವಾರಗಳು, ತಿಂಗಳುಗಳು ಇನ್ನೂ ಕೆಲವೊಮ್ಮೆ ಹಲವು ವರ್ಷಗಳ ಕಾಲ ಬಾಧಿಸುತ್ತಿರುತ್ತದೆ. ಈ ನೋವನ್ನು ಸಹಿಸಿಕೊಳ್ಳುವುದು ಬಲು ಕಷ್ಟ. ಹೆಚ್ಚಿನವರು ನೋವು ನಿವಾರಕ ಬಾಮ್, ತೈಲ, ಬಿಸಿ ನೀರಿನ ಶಾಖ ಹೀಗೆ ಸ್ವ ಚಿಕಿತ್ಸೆಗಳನ್ನು ಮಾಡಿ ಗುಣವಾಗದೆ ಇದ್ದ ಸಂದರ್ಭಗಳಲ್ಲಿ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆಯುತ್ತಾರೆ.

ನಿಮ್ಮ ಬೆನ್ನುನೋವಿನ ಪ್ರಥಮ ಹಂತದಲ್ಲೇ, ತಜ್ಞ ವೈದ್ಯರನ್ನು ಭೇಟಿಯಾಗಿ ನೋವಿನ ಸಂಪೂರ್ಣ ಮಾಹಿತಿಗಳನ್ನು ಅವರಲ್ಲಿ ಹೇಳಿ ಸೂಕ್ತವಾದ ಸಲಹೆಗಳನ್ನು, ಚಿಕಿತ್ಸೆಗಳನ್ನು ಪಡೆದುಕೊಂಡು ನೋವಿನ ಆರಂಭದಲ್ಲೇ ಪರಿಹರಿಸಿಕೊಳ್ಳುವುದು ಸೂಕ್ತ.
ಯಾವ ಕಾರಣದಿಂದಾಗಿ ಬೆನ್ನು ನೋವು ಬರುತ್ತಿದೆ ಎಂಬ ಮೂಲ ಕಾರಣವನ್ನು ಕಂಡುಹಿಡಿದು, ನಂತರ ಬೆನ್ನು ನೋವಿಗೆ ಪರಿಹಾರ ಕಂಡುಹಿಡಿಯುವುದು ಸೂಕ್ತ.

ಬೆನ್ನು ನೋವಿಗೆ ಕಾರಣಗಳು: –

ಒತ್ತಡ: ಒತ್ತಡಕ್ಕೊಳಗಾದ ಸ್ನಾಯುಗಳು ಹಾಗೂ ಅಸ್ಥಿ ರಜ್ಜುಗಳು:

ಭುಜದಲ್ಲಿರುವ ಸ್ನಾಯುಗಳು, ರೊಂಬೋಯ್ಡ್, ಟ್ರಪೇಜಿಯಸ್ ಸ್ನಾಯುಗಳು ನಮ್ಮ ತಲೆಯು ನೆಟ್ಟಗೆ, ಭುಜಗಳ ಮಧ್ಯೆ ಸುಸ್ಥಿರವಾಗಿ ನಿಲ್ಲಲು ಸಹಾಯ ಮಾಡುತ್ತದೆ. ಯಾವಾಗ ಈ ಸ್ನಾಯುಗಳಿಗೆ ಒತ್ತಡ ಬೀಳುತ್ತದೆಯೋ, ಅಂತಹ ಸಂದರ್ಭಗಳಲ್ಲಿ ವಿಶೇಷ ಆರೈಕೆ ಮಾಡಬೇಕಾಗುತ್ತದೆ. ನಾವು ದೈನಂದಿನ ಕೆಲಸ ಕಾರ್ಯಗಳನ್ನು ಮಾಡುವಾಗ ಒಂದು ತೋಳಿಗೆ ಮಾತ್ರ ಆಗಿಂದಾಗ್ಗೆ ಹೆಚ್ಚು ಕೆಲಸ ಕೊಡುತ್ತಿದ್ದಲಿ,್ಲ ನಮ್ಮ ಶರೀರದ ಒಂದು ಭಾಗಕ್ಕೆ ಮಾತ್ರ ಹೆಚ್ಚು ಭಾರ ಬೀಳುವುದರಿಂದ ಬೆನ್ನು ಮೂಳೆಯ ಸ್ನಾಯುಗಳು ಹಾಗೂ ನರಗಳ ಮೇಲೆ ಪರಿಣಾಮ ಬೀರಿ ಅಸಮತೋಲನ ಸೃಷ್ಟಿಸುತ್ತದೆ.

• ಅಂಗಾಂಗಗಳ ಅಸಮರ್ಪಕ ಚಲನೆಯಿಂದಲೂ ಬೆನ್ನು ನೋವು ಉಂಟಾಗುತ್ತದೆ.
• ಸ್ನಾಯುಗಳ ಸೆಳೆತದಿಂದಲೂ ಬೆನ್ನು ನೋವು ಬರುತ್ತದೆ.
• ಹಠಾತ್ ಆಗಿ ಭಾರ ಎತ್ತುವುದು: ಇದರಿಂದಾಗಿ ಬೆನ್ನಿನ ಕೆಳಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳಬಹುದು. ಹಾಗೆಯೇ ಪುಟ್ಟ ಮಕ್ಕಳನ್ನು ಎತ್ತಿಕೊಳ್ಳುವಾಗಲೂ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ. ಬಾಗಬೇಕಾದ ಸಂದರ್ಭಗಳಲ್ಲಿ, ನೇರವಾಗಿ ಸೊಂಟದಿಂದ ಬಗ್ಗಬೇಡಿ, ಬದಲಾಗಿ ಮೊಣಕಾಲುಗಳನ್ನುಪಯೋಗಿಸಿ ಮೊಣಕಾಲನ್ನು ಬಗ್ಗಿಸಿ ನಿಮ್ಮ ಕಾಲುಗಳನ್ನು ಮೇಲಕ್ಕೆತ್ತುವುದು ಸರಿಯಾದ ಕ್ರಮ.
• ನಿದ್ರಿಸುವ ಹಾಸಿಗೆ: ನಮ್ಮ ಶರೀರದ ಅಂಗಾಂಗಗಳಿಗೆ ಸರಿಯಾದ ಸಪೋರ್ಟ್ ದೊರಕದೆ ಬೆನ್ನು ನೋವು ಬರುವ ಸಂಭವನೀಯತೆ ಅಧಿಕ.

ರಚನಾತ್ಮಕ ಸಮಸ್ಯೆಗಳು:

ಆರ್ಥೈಟಿಸ್ ಗೆ ಸಂಬಂಧಿಸಿದ ತೊಂದರೆಗಳು (ಆಂಗ್ಲ ಭಾಷೆಯಲ್ಲಿ ರಪ್ಚರ್ಡ್ ಡಿಸ್ಕ್ ಎನ್ನುವರು. ಸ್ಲಿಪ್ ಡಿಸ್ಕ್ ಅಥವಾ ಹರ್ನಿಯೇಟೆಡ್ ಡಿಸ್ಕ್ ಎಂದೂ ಕರೆಯುತ್ತಾರೆ): ನಮ್ಮ ಬೆನ್ನು ಮೂಳೆಯಲ್ಲಿರುವ ಪ್ರತಿಯೊಂದು ಕಶೇರುಖಂಡಗಳು ಡಿಸ್ಕ್ ಗಳಿಂದ ಆವೃತವಾಗಿದ್ದು, ಡಿಸ್ಕ್ ಗಳು ಛಿದ್ರಗೊಂಡರೆ ನರಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಬೆನ್ನು ನೋವಿಗೆ ಕಾರಣವಾಗುತ್ತದೆ.

ಬಲ್ಜಿಂಗ್(ಉಬ್ಬಿದ) ಡಿಸ್ಕ್ ಗಳು: ಛಿದ್ರಗೊಂಡ ಡಿಸ್ಕ್ ಗಳಂತೆಯೇ, ಬಲ್ಜ್ ಆದಂತಹ ಡಿಸ್ಕ್ ಗಳೂ ಸಹ ನರಗಳ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗಿ ಬೆನ್ನು ನೋವನ್ನು ಉಂಟುಮಾಡುತ್ತದೆ.

ಸಯಾಟಿಕಾ: ಬಲ್ಜಿಂಗ್ ಅಥವಾ ಹರ್ನಿಯೇಟೆಡ್ ಡಿಸ್ಕ್ ಸಮಸ್ಯೆಯಿಂದಾಗಿ ನರಗಳ ಮೇಲೆ ಒತ್ತಡ ಬಿದ್ದು, ಕಾಲುಗಳ ಹಿಂಭಾಗದಲ್ಲಿ ತೀವ್ರತರವಾದ ನೋವು ಹಾಗೂ ಹಿಂಡಿದಂತಹ ಅನುಭವವಾದರೆ ಇದನ್ನು ಸಿಯಾಟಿಕಾ ನೋವು ಎಂದು ಹೇಳಬಹುದು.

ಆರ್ಥೈಟಿಸ್(ಸಂಧಿವಾತ): ಆಸ್ಟಿಯೋ ಆರ್ಥೈಟಿಸ್ (ಅಸ್ಥಿಸಂಧಿವಾತ) ಇರುವವರು ಹಿಪ್ ಜಾಯಿಂಟ್(ತೊಡೆ ಹಾಗೂ ಸೊಂಟದ ಸಂದು), ಬೆನ್ನಿನ ಕೆಳ ಭಾಗ, ಮೊಣಕಾಲು ಮತ್ತು ಕೈಗಳಲ್ಲಿ ನೋವನ್ನು ಅನುಭವಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಬೆನ್ನುಹುರಿಯ ಸುತ್ತಲಿನ ಸ್ಥಳ ಕಿರಿದಾಗುತ್ತದೆ ಇದನ್ನು ಸ್ಪೈನಲ್ ಸ್ಟೆನೋಸಿಸ್ ಎಂದೂ ಕರೆಯುತ್ತಾರೆ.

ಬೆನ್ನು ಮೂಳೆಯ ಅಸಹಜ ವಕ್ರತೆ: ಬೆನ್ನು ಮೂಳೆಯು ವಕ್ರವಾಗಿದ್ದರೆ ರೋಗಿಯು ಮತ್ತೆ ಪುನಃ ಈ ನೋವನ್ನು ಅನುಭವಿಸುವ ಸಾಧ್ಯತೆಯಿದೆ. ಉದಾಹರಣೆಗೆ: ಸ್ಕೋಲಿಯೋಸಿಸ್ ಅಂದರೆ ಬೆನ್ನು ಮೂಳೆ ವಕ್ರವಾಗಿ ಒಂದು ಬದಿಗೆ ಬಾಗುವುದು. ಈ ಸಂದರ್ಭದಲ್ಲೂ ಸಹ ರೋಗಿಯು ಅತೀವ ನೋವನ್ನು ಅನುಭವಿಸಬೇಕಾಗುತ್ತದೆ.

ಆಸ್ಟಿಯೋಪೊರೋಸಿಸ್: ಬೆನ್ನು ಮೂಳೆಯ ಕಶೇರುಖಂಡ ಸೇರಿದಂತೆ, ಮೂಳೆಗಳು ಸುಲಭವಾಗಿ ಸಂಕೋಚನ ಹಾಗೂ ಮುರಿತಗಳ ಅವಕಾಶವನ್ನು ಹೆಚ್ಚಿಸುತ್ತದೆ.

ಸ್ಪಾಂಡಿಲೊಲಿಸ್ಥೆಸಿಸ್: ವಯಸ್ಸಾದಂತೆಲ್ಲಾ ಕೀಲುಗಳು ಮತ್ತು ಲಿಗಮೆಂಟ್ಸ್ ಅಂದರೆ ಅಸ್ಥಿರಜ್ಜುಗಳು ಬೆನ್ನು ಮೂಳೆಯನ್ನು ಸರಿಯಾದ ಸ್ಥಾನದಲ್ಲಿರುವಂತೆ ಮಾಡುವುದು ಕಷ್ಟವಾಗುತ್ತದೆ. ಯಾವಾಗ ಕಶೇರುಖಂಡಗಳು ಚಲಿಸಬೇಕಾದುದಕ್ಕಿಂತ ಹೆಚ್ಚಾಗಿ ಚಲಿಸುವುದೋ, ಇನ್ನೊಂದು ಕಶೇರುಖಂಡದ ಮೇಲೆ ಜಾರುತ್ತದೆ, ಇದರಿಂದಾಗಿ ಮೂಳೆಗಳು ಬೆನ್ನುಹುರಿಯ ನರಗಳ ಮೇಲೆ ಒತ್ತಬಹುದು ಹಾಗೂ ಕೆಳ ಬೆನ್ನಿನ(ಲೋಯರ್ ಬ್ಯಾಕ್) ನೋವಿಗೆ ಕಾರಣವಾಗಬಹುದು.

ಸ್ಪಾಂಡಿಲೈಟಿಸ್: ಸ್ಪಾಂಡಿಲೈಟಿಸ್ ಅನ್ನು ಸೋಂಕುರಹಿತ ಬೆನ್ನು ಮೂಳೆಯ ಉರಿಯೂತ ಎಂದು ಕರೆಯಲಾಗುತ್ತದೆ. ಬೆನ್ನು ಮೂಳೆಯ ಬಿಗಿದಂತಾಗುವಿಕೆ ಹಾಗೂ ನೋವಿಗೆ ಕಾರಣವಾಗಿ ದಿನದ ಮುಂಜಾನೆಯಂತೂ ಪ್ರಯಾಸಕರವಾಗುತ್ತದೆ.

ಅಂಕೈಲೋಸಿಂಗ್ ಸ್ಪಾಂಡಿಲೈಟಿಸ್: ಸಾಮಾನ್ಯವಾಗಿ ಹದಿಹರೆಯದವರಲ್ಲಿ ಪ್ರಾರಂಭವಾಗುತ್ತದೆ ಹಾಗೂ ಯುವ ಜನತೆಯಲ್ಲೂ ಇದನ್ನು ಕಾಣಬಹುದಾಗಿದೆ.

ಸ್ಪಾಂಡಿಲೋಸಿಸ್: ಯಾವಾಗ ಇಂಟರ್ ವರ್ಟೆಬ್ರಲ್  ಗಳು ತೇವಾಂಶವನ್ನು ಕಳೆದುಕೊಳ್ಳುತ್ತವೆಯೋ ಹಾಗೂ ವಯಸ್ಸಾದಂತೆಲ್ಲಾ ಸ್ಪಾಂಡಿಲೋಸಿಸ್ ಬರುವ ಸಂಭಾವ್ಯತೆ ಹೆಚ್ಚು. ಇದು ಡಿಸ್ಕ್ ಗಳ ಗಾತ್ರವನ್ನು ಕುಗ್ಗಿಸುತ್ತದೆ. ಈ ಸ್ಥಿತಿಯಲ್ಲಿ ಸಣ್ಣ ಆಘಾತ ಅಥವಾ ಉಳುಕೂ ಸಹ ಉರಿಯೂತ ಮತ್ತು ನರಗಳ ಮೂಲ ಪ್ರಚೋದನೆಗೆ ಕಾರಣವಾಗಬಹುದು.

ಫೈಬ್ರೋಮಾಲ್ಜಿಯಾ ಕಂಡು ಬರುವ ವ್ಯಕ್ತಿಯಲ್ಲಿ ಸ್ನಾಯುಗಳ ಸೆಳೆತ, ಮೃದುತ್ವ ಹಾಗೂ ಸುಸ್ತು ಸಾಮಾನ್ಯವಾಗಿರುವ ಲಕ್ಷಣಗಳು. ಬಹಳ ತೀವ್ರವಾದ ಅಥವಾ ತಿವಿಯುವಂತಹ ನೋವು, ಸುಡುವಂತಹ ನೋವು ಹಾಗೂ ಕೆಲಸ ಮಾಡಿದಂತೆಲ್ಲಾ ಇನ್ನಷ್ಟು ತೀಕ್ಷ್ಣವಾದ ನೋವು, ಶೀತ ಅಥವಾ ಹವಾಮಾನಕ್ಕೆ ಅನುಗುಣವಾಗಿ ಉದ್ವೇಗ ಹಾಗೂ ಒತ್ತಡಗಳೂ ಸಹ ಇರಬಹುದು.

ಮಯೋಫೇಶಿಯಲ್ ನೋವು ಇರುವವರ ಸ್ನಾಯುಗಳು ಬಹಳಷ್ಟು ಮೃದುವಾಗಿದ್ದು, ಸ್ನಾಯುಗಳ ಚಲನೆಯು ಸಂಕುಚಿತಗೊಳ್ಳುತ್ತದೆ. ನರಗಳ ನೋವು, ಅಂಗಾಂಗಗಳನ್ನು ವಿಸ್ತರಿಸಿದಾಗ ಸ್ವಲ್ಪ ಮಟ್ಟಿಗೆ ನೋವು ಕಡಿಮೆಯಾಗುವುದು.

ಕ್ವಾಡಾ ಈಕ್ವಿನಾ ಸಿಂಡ್ರೋಮ್ ಇದನ್ನು “ಮೆಡಿಕಲ್ ಎಮರ್ಜೆನ್ಸಿ” ಎಂದು ಪರಿಗಣಿಸಲಾಗುತ್ತದೆ. ಡಿಸ್ಕ್ ಮೆಟೀರಿಯಲ್ ಬೆನ್ನು ಹುರಿಯ ಕೆನಾಲ್‍ವರೆಗೆ ಹಿಗ್ಗಿ, ನರಗಳನ್ನು ಒತ್ತುತ್ತದೆ. ಬೆನ್ನು ಹುರಿಯು ಒತ್ತಲ್ಪಡುವುದರಿಂದ ನೋವು ಮಾತ್ರವಲ್ಲದೇ ಸ್ಪರ್ಷ ಸಂವೇದನೆಯನ್ನು ಕಳೆದುಕೊಳ್ಳುವ ಸಂಭವನೀಯತೆಯೂ ಸಹ ಇರುವುದು. ಮೂತ್ರ ವಿಸರ್ಜನೆಯನ್ನು ನಿಯಂತ್ರಿಸಲು ಅಸಮರ್ಥತೆ ಹಾಗೂ ಮೂತ್ರ ವಿಸರ್ಜನೆಯನ್ನು ಆರಂಭಿಸಲು ಅಸಮರ್ಥರಾಗಿರುವ ಸಂಭಾವ್ಯತೆಗಳೂ ಸಹ ಅಧಿಕವಾಗಿರುವುದು.

ವೈರಲ್ ಸೋಂಕುಗಳಾದ ಹರ್ಪಿಸ್ ಝೋಸ್ಟರ್(ಸರ್ಪ ಸುತ್ತು/ವಿಸರ್ಪ)ನಂತಹ ಕಾಯಿಲೆಗಳು ಬೆನ್ನಿನ ಮೂಳೆಯಿಂದ ವಿಸ್ತಾರವಾಗುವ ನರಗಳ ಉರಿಯೂತಕ್ಕೆ ಕಾರಣವಾಗಬಹುದು.

ಹಾಗೆಯೇ, ಪೋಸ್ಟ್ ವೈರಲ್ ಆರ್ಥರೈಟಿಸ್ ಅಂದರೆ ವೈರಲ್ ಜ್ವರದ ನಂತರ ಕೆಲವರಲ್ಲಿ ಸ್ನಾಯು ಸಂಧಿಗಳಲ್ಲಿ, ಬೆನ್ನು ಮೂಳೆಗಳಲ್ಲಿ ಅತ್ಯಂತ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.
ಗರ್ಭಧಾರಣೆ ಈ ಸಮಯದಲ್ಲಿ ದೇಹದ ತೂಕ ಸ್ವಾಭಾವಿಕವಾಗಿ ಹೆಚ್ಚಾಗುವುದರಿಂದ ನಿಮ್ಮ ಭಂಗಿಯಲ್ಲಿ ಬದಲಾವಣೆಗಳಾಗುತ್ತವೆ.

ಗರ್ಭದಾರಣೆ ಸಮಯದಲ್ಲಿ ತೂಕ ಹೆಚ್ಚಾಗುವ ಕಾರಣ ಕೆಳ ಬೆನ್ನಿನ ಮೂಳೆಯ ಮೇಲೆ ಒತ್ತಡ ಹೆಚ್ಚಾಗಿ ಬಿದ್ದು, ನೋವು ಕಾಣಿಸುತ್ತದೆ. ಸಾಮಾನ್ಯವಾಗಿ, ಯಾವ ರೀತಿಯ ಬೆನ್ನು ನೋವು ಎನ್ನುವುದನ್ನು ರೋಗಿಯ ದೈಹಿಕ ಪರೀಕ್ಷೆಯಿಂದ ಆಧರಿಸಿದ ಲಕ್ಷಣಗಳ ಸಹಾಯದಿಂದ ತಿಳಿದುಕೊಳ್ಳಲಾಗುತ್ತದೆ.

ಆಯುರ್ವೇದದಲ್ಲಿ ಸಮಗ್ರ ಚಿಕಿತ್ಸಾ ವಿಧಾನ ಒಳಗೊಂಡಿದ್ದು, ರೋಗ ನಿರ್ಣಯ ಕಾರ್ಯವನ್ನು ವಿಶಿಷ್ಟ ರೀತಿಯಲ್ಲಿ ನಿರ್ವಹಿಸಲಾಗುತ್ತದೆ. ಇದು ಶಾರೀರಿಕ ಹಾಗೂ ಒಟ್ಟಾರೆ ರೋಗಿಯ ಜೀವನ ಶೈಲಿಯ ತಪಾಸಣೆಯನ್ನು ಒಳಗೊಂಡಿರುತ್ತದೆ. ರೋಗ ನಿರ್ಣಯ ಕಾರ್ಯ ವಿಧಾನಗಳು ರೋಗಿಯ ಒಟ್ಟಾರೆ ಜೀವನ ಶೈಲಿಯ ಅವಲೋಕನವೆಂದರೂ ತಪ್ಪಾಗಲಾರದು. ಕೆಲವೊಮ್ಮೆ, ಯಾವ ರೋಗವೆಂಬುದನ್ನು ಕಂಡುಹಿಡಿಯಲು ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ವಿಶೇಷ ಪರೀಕ್ಷೆಗೆ ಹಾಗೂ ಚಿಕಿತ್ಸಾ ವಿಧಾನಕ್ಕೆ ಒಳಪಡಬೇಕಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ವೈದ್ಯರು ಎಕ್ಸ್ ರೇ, ಎಮ್‍ಆರ್‍ಐ ಸ್ಕ್ಯಾನ್ ಮಾಡುವಂತೆಯೂ ಸೂಚಿಸಬಹುದು.

ಸಾಮಾನ್ಯವಾಗಿ, ಯಾವ ಆಯುರ್ವೇದ ಚಿಕಿತ್ಸೆಯನ್ನು ಬೆನ್ನು ನೋವಿನ ಉಪಶಮನಕ್ಕೆ ಬಳಸಲಾಗುತ್ತದೆ?

ಅಭ್ಯಂಗಮ್: ಔಷಧಿಯುಕ್ತವಾದ ತೈಲವನ್ನುಪಯೋಗಿಸಿಕೊಂಡು ಪೂರ್ಣವಾಗಿ ದೇಹದ ಮಸಾಜ್(ಕಾಲು ಬೆರಳಿಂದ ಮೊದಲ್ಗೊಂಡು ತಲೆಯವರೆಗೆ) ಮಾಡುವುದಕ್ಕೆ ಅಭ್ಯಂಗವೆಂದು ಕರೆಯುತ್ತಾರೆ. ಇದು ಸಂದು ಹಾಗೂ ಇನ್ನಿತರ ನೋವುಗಳಿಂದ ಮುಕ್ತಿ ನೀಡುವುದಲ್ಲದೆ, ಶರೀರದ ನರಗಳಿಗೆ ನವ ಚೈತನ್ಯವನ್ನು ನೀಡುವುದರ ಮೂಲಕ ಶರೀರವನ್ನು ಪುನಃಶ್ಚೇತನಗೊಳಿಸುತ್ತದೆ.

ಕಟಿಬಸ್ತಿ: ಕಪ್ಪು ಉದ್ದು ಅಥವಾ ಸಂಪೂರ್ಣ ಗೋಧಿ ಹಿಟ್ಟಿನಿಂದ ಕೆಳ ಬೆನ್ನಿನ ಭಾಗದಲ್ಲಿ ವೃತ್ತಾಕಾರದ ರಚನೆಯನ್ನು ಮಾಡಿ ಗಿಡಮೂಲಿಕೆಯಿಂದ ತಯಾರಿಸಿದ ಬೆಚ್ಚಗಿನ ಎಣ್ಣೆಯನ್ನು ಸುರಿಯುತ್ತಾರೆ. ಸ್ಪಾಂಡಿಲೋಸಿಸ್, ಇಂಟರ್ – ವರ್ಟೆಬ್ರಲ್ ಡಿಸ್ಕ್ ಪ್ರೊಲ್ಯಾಪ್ಸ್, ಲುಂಬಾಗೊ (ಕೆಳ ಬೆನ್ನು ನೋವು) ಹಾಗೂ ಸಯಾಟಿಕಾ ಗುಣಪಡಿಸುವಲ್ಲಿ ಸಹಕಾರಿ.

ಪಿಝ್ಹಿಚಿಲ್: ಬೆಚ್ಚಗಿನ ಔಷಧೀಯ ಎಣ್ಣೆಯಲ್ಲಿ ಒಂದು ತುಂಡು ಬಟ್ಟೆಯನ್ನು ನೆನೆಸಿಟ್ಟು, ಈ ಬಟ್ಟೆಯನ್ನು ರೋಗಿಯ ದೇಹದ ಮೇಲೆ ಹಿಸುಕಿ, ಎಣ್ಣೆಯನ್ನು ಧಾರೆಯಾಗಿ ಸುರಿಯಲಾಗುವುದು. ಈ ಚಿಕಿತ್ಸೆಯು ಸ್ನಾಯುಗಳನ್ನು ಹಾಗೂ ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ ಮತ್ತು ಸದೃಢಗೊಳಿಸುತ್ತದೆ.

ಕಿಝ್ಹಿ: ಮಸ್ಲಿನ್ ಬಟ್ಟೆಯಲ್ಲಿ ಗಿಡಮೂಲಿಕೆಗಳು, ಪುಡಿಗಳು ಅಥವಾ ಅಕ್ಕಿ, ಮರಳನ್ನು ಕಟ್ಟಿ ಸಣ್ಣ ಪೊಟಲಿಗಳನ್ನು ಮಾಡಿ ಬಿಸಿಮಾಡಿ ಅವುಗಳನ್ನು ಅವಶ್ಯಕವಿರುವ ಅಂಗಾಂಗಗಳ ಮೇಲೆ ಲಘುವಾಗಿ ಬಡಿಯಲಾಗುತ್ತದೆ. ಈ ಮಸಾಜ್‍ನಿಂದ ವಾತ ಹಾಗೂ ವಾತ ಪಿತ್ತಗಳು ಹತೋಟಿಗೆ ಬಂದು ಇವುಗಳಿಂದ ಉಂಟಾದ ನೋವು ಶಮನವಾಗುತ್ತದೆ.

ಸ್ನೇಹಬಸ್ತಿ: ಈ ವಿಧಾನದಲ್ಲಿ ಔಷಧೀಯ ಎಣ್ಣೆ ಹಾಗೂ ಎನಿಮಾವನ್ನು ಬಳಸಲಾಗುತ್ತದೆ. ಕೆಳ ಬೆನ್ನಿನ ನೋವು ಹಾಗೂ ಸಂಧಿವಾತಗಳ ಚಿಕಿತ್ಸೆಯಲ್ಲಿ ಸ್ನೇಹ ಬಸ್ತಿಯನ್ನು ಬಳಸುತ್ತಾರೆ.

ಕಷಾಯ ಬಸ್ತಿ: ಇದು ಹೆಸರೇ ಸೂಚಿಸುವಂತೆ ಔಷಧೀಯ ಕಷಾಯ ಹಾಗೂ ಎನಿಮಾವನ್ನು ಒಳಗೊಂಡಿದೆ. ಕೆಳಭಾಗದ ಬೆನ್ನು ನೋವು, ಸಂಧಿವಾತದ ಚಿಕಿತ್ಸೆಯಲ್ಲಿ ಕಷಾಯ ಬಸ್ತಿಯನ್ನು ಬಳಸುತ್ತಾರೆ. ಕೆಳ ಬೆನ್ನು ನೋವಿಗೆ ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತ ಆಯುರ್ವೇದ ಚಿಕಿತ್ಸಾ ಪದ್ಧತಿಯೂ ಹೌದು.

 

 

Image Source: http://www.freepik.com. Designed by Freepik

Related Posts

Puttur: Rotary Club Puttur Yuva organized “Rota Yuva Treasure Hunt” on Sept 8th. Participants ...
Team Southcanara
September 11, 2019
  Rotary Club Puttur Yuva will be organising treasure hunt on September 8th, 2019 in Puttur. ...
Team Southcanara
September 5, 2019
Dengue prevention and precaution event was held for Karnataka Construction Workers Association on ...
Team Southcanara
August 29, 2019